||ಶ್ರೀ ಸಾಯಿ ಸಚ್ಚರಿತ್ರೆ||
||ಇಪ್ಪತ್ತಾರನೆಯ ಅಧ್ಯಾಯ||
||ಹೋಸ ಜೀವನದ ಆಶ್ವಾಸನೆ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
||ಇಪ್ಪತ್ತಾರನೆಯ ಅಧ್ಯಾಯ||
||ಹೋಸ ಜೀವನದ ಆಶ್ವಾಸನೆ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಭಕ್ತ ಪಂತ, ಹರಿಶ್ಚಂದ್ರ ಪಿತಳೆ, ಗೋಪಾಲ ಅಂಬಾಡೇಕರ್, ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.
ಮಾಯೆಯ ಆಟ
ಮಾಯೆಯ ಸಹಾಯದಿಂದ ದೇವರು ಈ ಪ್ರಪಂಚವನ್ನು ಸೃಷ್ಟಿಸಿದ್ದಾನೆ. ಮಾಯೆಯ ಆಟ ಎಲ್ಲ ಕಾಲದಲ್ಲೂ, ಈ ಪ್ರಪಂಚದಲ್ಲಿ ಎಲ್ಲೆಲ್ಲೂ ತುಂಬಿಕೊಂಡಿದೆ. ಮಸುಕು ಬೆಳಕಿನಲ್ಲಿ ಹಗ್ಗ ಹಾವಿನಂತೆ ಕಾಣುತ್ತದೆ. ಬೆಳಕು ಸ್ಪಷ್ಟವಾದ ಕೂಡಲೆ ಅದು ಹಗ್ಗವೆಂದು ತಿಳಿಯುತ್ತದೆ. ಇಂತಹ ಸ್ಪಷ್ಟ ಬೆಳಕು, ಎಂದರೆ ಜ್ಞಾನ, ಕೊಡ ಬಲ್ಲವನು ಆ ಸದ್ಗುರುವೊಬ್ಬನೇ! ವಿಷಯೇಂದ್ರಿಯ ವಸ್ತುಗಳು ನಿತ್ಯಗಳು ಎಂಬ ಅಜ್ಞಾನದಿಂದ ಕೂಡಿದ ನಾವು ಅವುಗಳನ್ನು ಬಯಸಿ ಅವನ್ನು ಹೊಂದಲು ಒದ್ದಾಡುತ್ತೇವೆ. ಕಾಲ ಕಳೆಯುತ್ತಾ ಬಂದಂತೆ ಅವು ನಿತ್ಯಗಳಲ್ಲ, ಸ್ವಲ್ಪ ಕಾಲವಿದ್ದು ಹೋಗುವಂತಹವು ಎಂಬುದು ಅರ್ಥವಾಗುತ್ತದೆ. ರಸನೇಂದ್ರಿಯ ತೃಪ್ತಿಗಾಗಿ ನಾವು ತಿನ್ನುವ ತಿನುಬಾಂಡಾರಗಳು ರುಚಿಯಾಗಿರುವುದು ನಾಲಗೆಯ ಮೇಲಿದ್ದಷ್ಟು ಕಾಲ ಮಾತ್ರ. ದೃಗಿಂದ್ರಿಯ ವಸ್ತುಗಳಾದ ಸೌಂದರ್ಯ ಮುಂತಾದವುಗಳು ಕೇವಲ ತೋರಿಕೆಗೆ ಮಾತ್ರವೇ! ಹಾಗೆಯೇ ಇತರ ಇಂದ್ರಿಯ ವಸ್ತುಗಳೂ ಕೂಡಾ. ಎಲ್ಲ ವಿಷಯೇಂದ್ರಿಯಗಳ ವಸ್ತುಗಳು ಹಾಗೆ ತೋರುವುದು ಸ್ವಲ್ಪಕಾಲ ಮಾತ್ರವೇ! ಅವೆಲ್ಲವೂ ಅನಿತ್ಯಗಳು. ಆದರೆ ಕಾಲದಿಂದ ಬದಲಾಗದ ವಸ್ತುವೊಂದಿದೆ. ಅದೇ ಆತ್ಮ! ಈ ಆತ್ಮಸಾಕ್ಷಾತ್ಕಾರದ ಕಡೆಗೆ ಕರೆದುಕೊಂಡು ಹೋಗಬಲ್ಲವನು ಆ ಸದ್ಗುರುವೊಬ್ಬನೇ! ಅಂತಹ ಸದ್ಗುರು ನಮ್ಮ ಸಾಯಿಬಾಬಾ. ಅವರು ಅವತರಿಸಿರುವುದೇ, ಕೈಹಿಡಿದು ನಮ್ಮನ್ನು ಋಜುಮಾರ್ಗದಲ್ಲಿ ನಡೆಸಿ, ನಮ್ಮನ್ನು ಆ ಸಾಕ್ಷಾತ್ಕಾರದ ಗುರಿ ಮುಟ್ಟಿಸಲೆಂದು. ಅದಕ್ಕೆ, ಅವರು ನಮ್ಮ ಸಹಕಾರವನ್ನು ಕೇಳುತ್ತಾರೆ. ಅಕುಂಠಿತ ಶ್ರದ್ಧಾ ಭಕ್ತಿಗಳಿಂದ, ನಾವು ಅವರಲ್ಲಿ ಶರಣಾಗತರಾಗುವುದೇ ಅದು. ನಾವು ಸಹಕರಿಸದಿದ್ದರೂ, ಅವರೇನೂ ನಮ್ಮ ಕೈಬಿಡುವುದಿಲ್ಲ. ನಮ್ಮನ್ನು ಅಡ್ಡಹಾದಿ ಹಿಡಿಯದಂತೆ, ನಮ್ಮ ಮೇಲೆ ಕಣ್ಣಿಟ್ಟು ನೋಡುತ್ತಾ, ಸಮಯಬಂದಾಗ ನಮ್ಮನ್ನು ಮತ್ತೆ ಸರಿಯಾದ ದಾರಿಗೆ ಎಳೆದು ತರುತ್ತಾರೆ. ನಮ್ಮ ಸಹಕಾರವಿಲ್ಲದಿದ್ದಾಗ, ನಮಗೆ ಸಾಕ್ಷಾತ್ಕಾರ ಆಗಲು ಬಹಳ ಕಾಲವಾಗುತ್ತದೆ. ಅವರ ನಾಮವನ್ನು ತಪ್ಪಿಯಾದರೂ ಒಂದುಸಲ ನೆನಸಿದರೆ ಸಾಕು, ಅವರು ನಮ್ಮ ಕೈಹಿಡಿದು ಮಾರ್ಗದರ್ಶಿಯಾಗುತ್ತಾರೆ. ನಮಗೆ ದೊರೆತಿರುವ ಅಂತಹ ಅನರ್ಘ್ಯ ರತ್ನವನ್ನು ದೂರಮಾಡದೆ, ಆ ದಯೆ ಅನುಕಂಪಗಳಿಂದ ತುಂಬಿದ ಕರುಣಾಮೂರ್ತಿಯ ಚರಣಾರವಿಂದಗಳಲ್ಲಿ ನಮಸ್ಕರಿಸಿ ಅವರ ಕೃಪೆಗೆ ಪಾತ್ರರಾಗೋಣ.
ಮಾನಸ ಪೂಜೆ
ಹಾಗೆ ಸಂಪೂರ್ಣ ಶರಣಾಗತರಾಗುವುದು ಹೇಗೆ ಎಂಬ ರೀತಿಯೊಂದನ್ನು ಹೇಮಾಡ್ ಪಂತ್ ನಮಗೆ ತೋರಿಸಿಕೊಟ್ಟಿದ್ದಾರೆ. ಬಾಬಾರ ಸಗುಣ ಮೂರ್ತಿಯನ್ನು ನಿಮ್ಮ ಮನೋ ಚಕ್ಷುಗಳ ಮುಂದೆ ನಿಲ್ಲಿಸಿ. ಬಾಬಾ ತಮ್ಮ ಬಲಗಾಲನ್ನು ಎಡಗಾಲ ಮೇಲಿಟ್ಟು ಗಾಂಭೀರ್ಯದ ಮೂರ್ತಿಯಾಗಿ ಕುಳಿತಿದ್ದಾರೆ. ಎಡಗೈ ಬಲಗಾಲ ಪಾದದ ಮೇಲಿದೆ. ಬಲಗೈ ಅಭಯ ಮುದ್ರೆಯನ್ನು ತೋರಿಸುತ್ತಿದೆ. ನಮ್ಮನ್ನು ನಾವೇ ಮರೆಯುವಂತೆ ಮಾಡುವ ಮುಖ, ಮುಗುಳ್ನಗೆಯನ್ನು ಸೂಸುತ್ತಿದೆ. ಕರುಣಾ ಮೂರ್ತಿಯಾದ ಅವರ ನೇತ್ರಗಳು ನಮ್ಮತ್ತಲೇ ದೃಷ್ಟಿ ಬೀರುತ್ತಿವೆ. ಅವರು ನಮಗಾಗಿಯೇ ಎದುರುನೋಡುತ್ತಾ ಕುಳಿತಿರುವಂತಿದೆ. ಅಂತಹ ದೇವತಾ ಮೂರ್ತಿಯನ್ನು ಕಂಡ ನಮ್ಮ ಮನಸ್ಸು ತುಂಬಿಹೋಗಿ, ಕಣ್ಣುಗಳು ಸುಖೋಷ್ಣವಾದ ಆನಂದಬಾಷ್ಪಗಳನ್ನು ಸುರಿಸುತ್ತಿವೆ. ಈ ಸುಖೋಷ್ಣ ಆನಂದಬಾಷ್ಪಗಳಿಂದ ಬಾಬಾರ ಚರಣಗಳನ್ನು ತೊಳೆಯೋಣ. ಅಕುಂಠಿತ ಪ್ರೇಮವೆಂಬ ಚಂದನವನ್ನು, ಅವರ ಕೈಕಾಲು ಮುಖಗಳಿಗೆ ಲೇಪಿಸೋಣ. ಅಚಂಚಲ ಶ್ರದ್ಧೆಯೆಂಬ ವಸ್ತ್ರದಿಂದ ಅವರನ್ನು ಆಚ್ಛಾದಿಸೋಣ. ಅಷ್ಟ ಸಾತ್ವಿಕ ಭಾವಗಳೆಂಬ ಅರವಿಂದಗಳನ್ನು ಅವರಿಗೆ ಅರ್ಪಿಸೋಣ. ಏಕಾಗ್ರ ಮನಸ್ಸೆಂಬ ಫಲವನ್ನು ಅವರಿಗೆ ಸಮರ್ಪಿಸೋಣ. ನಿಶ್ಚಲ ಭಕ್ತಿಯೆಂಬ ಸೊಂಟಪಟ್ಟಿಯನ್ನು ಅವರಿಗೆ ಸುತ್ತೋಣ. ಬಹುಶಃ ನಮ್ಮ ಈ ಅಲಂಕರಣಗಳಿಂದ ಬಾಬಾ ಆಯಾಸಪಟ್ಟರೇನೋ? ಅದಕ್ಕೆ ಮಯೂರಪುಚ್ಚ ಪಂಖದಿಂದ ಹಿತವಾಗಿ ಗಾಳಿ ಹಾಕೋಣ. ಇದೆಲ್ಲಾ ಆದಮೇಲೆ, ಅವರನ್ನು ಗಂಧಾಕ್ಷತೆಗಳಿಂದ ಪೂಜೆಮಾಡಿ ಪುಷ್ಪ, ಧೂಪ, ದೀಪ, ನೈವೇದ್ಯಗಳನ್ನು ಅರ್ಪಿಸಿ, ಆರತಿ ಮಾಡಿ ನಮಸ್ಕಾರಮಾಡೋಣ. ಹಾಗೆ ನಮಸ್ಕರಿಸಿ ಅವರನ್ನು ಪ್ರಾರ್ಥಿಸಿಕೊಳ್ಳೋಣ, "ಬಾಬಾ, ನಮ್ಮ ಮನಸ್ಸನ್ನು ಅಂತರ್ಮುಖಿಯನ್ನಾಗಿ ಮಾಡು. ನಿತ್ಯಾನಿತ್ಯ ಬೇಧವನ್ನು ಕಾಣುವ ದೃಷ್ಟಿಯನ್ನು ನೀಡು. ಈ ಅನಿತ್ಯ ಪ್ರಪಂಚಕ್ಕೆ ಕಟ್ಟಿಹಾಕಿರುವ ಮೋಹವೆಂಬ ಶೃಂಖಲೆಗಳಿಂದ ನಮ್ಮನ್ನು ಬಿಡಿಸು. ಕಾಯಾ, ವಾಚಾ, ಮನಸಾ ನಾವು ನಿನಗೆ ಶರಣಾಗಿದ್ದೇವೆ. ಹಾಗೆ ಶರಣಾಗತರಾಗಿರುವ ನಮ್ಮನ್ನು ನಿನಗೆ ಇಷ್ಟಬಂದ ರೀತಿಯಲ್ಲಿ ಉಪಯೋಗಿಸು. ನಿನ್ನ ಚರಣಾರವಿಂದಗಳಲ್ಲಿ ನಮಗೆ ಆಸರೆ ಕೊಟ್ಟು ಆತ್ಮಸಾಕ್ಷಾತ್ಕಾರದ ಹಾದಿಯಲ್ಲಿ, ನಮ್ಮ ಕೈಹಿಡಿದು ನಡೆಸಿ ನಮ್ಮನ್ನು ಗುರಿ ಮುಟ್ಟಿಸು."
ಭಕ್ತ ಪಂತರ ಕಥೆ
ಬೇರೊಬ್ಬ ಗುರುವಿನ ಶಿಷ್ಯರಾದ ಪಂತ್ ಎನ್ನುವ ಭಕ್ತನೊಬ್ಬನಿಗೆ, ಶಿರಡಿಗೆ ಬಂದು, ಬಾಬಾರನ್ನು ಕಾಣುವ ಇಚ್ಚೆಯೇನೂ ಇರಲಿಲ್ಲ. ಆದರೆ ವಿಧಿಯನ್ನು ಮೀರುವವರಾರು? ಅವರು ಬಿಬಿಸಿಐ (ಬೋಂಬೆ ಬರೋಡಾ ಮತ್ತು ಸೆಂಟ್ರಲ್ ಇಂಡಿಯ) ರೈಲಿನಲ್ಲಿ ತಮ್ಮ ಬಂಧು ಬಳಗಗಳೊಡನೆ ಪ್ರಯಾಣ ಮಾಡುತ್ತಿದ್ದರು. ಶಿರಡಿಗೆ ಹೊರಟಿದ್ದ ಅವರೆಲ್ಲ, ಪಂತರನ್ನೂ ತಮ್ಮ ಜೊತೆ ಶಿರಡಿಗೆ ಬರುವಂತೆ ಒತ್ತಾಯಮಾಡಿದರು. ಇಲ್ಲ ಎನ್ನಲಾಗದೆ ಅವರು ಒಪ್ಪಿಕೊಂಡರು. ಅವರೆಲ್ಲರೂ ಬೊಂಬಾಯಿಯಲ್ಲಿ ಇಳಿದರು. ಪಂತರು ವೀರಾರ್ವರೆಗೂ ಹೋಗಿ ತಮ್ಮ ಗುರುವನ್ನು ಕಂಡು, ಅವರ ಅನುಜ್ಞೆಯನ್ನು ಪಡೆದು ಮತ್ತೆ ತಮ್ಮ ಸಹ ಪ್ರಯಾಣಿಕರನ್ನು ಸೇರಿದರು. ತಾನು ಗುರುವಿನ ಅನುಜ್ಞೆ ಪಡೆದಿದ್ದರೂ, ಪಂತರಿಗೆ ಶಿರಡಿಗೆ ಹೋಗುವುದು ಅಷ್ಟು ಸರಿತೋರಲಿಲ್ಲ. ಇನ್ನೊಬ್ಬ ಗುರುವಿನ ಬಳಿಗೆ ಹೋಗುವುದು, ತನ್ನ ಗುರುವಿಗೆ ಅವಮಾನ ಮಾಡಿದಂತೆ ಎಂದು ಅವರ ಮನಸ್ಸಿನ ಅಳುಕು. ಹೇಗೋ ಅಂತೂ ಇತರರೊಡನೆ ಪಂತರು ಶಿರಡಿ ಸೇರಿದರು. ಬಾಬಾ ದರ್ಶನಕ್ಕೆ ಮಸೀದಿಗೆ ಹೋದಾಗ, ಅಲ್ಲಿ ಜನ ಗುಮ್ಮಿಗೂಡಿದ್ದರು. ಇದ್ದಕ್ಕಿದ್ದಹಾಗೆ ಪಂತರು ಅಲ್ಲಿ ಮೂರ್ಛೆ ಬಂದು ಕೆಳಗೆ ಬಿದ್ದರು. ಎಲ್ಲರೂ ಹೆದರಿಕೊಂಡು, ಅವರನ್ನು ಎಬ್ಬಿಸಲು ಪ್ರಯತ್ನಮಾಡಿದರು. ಬಾಬಾರ ಅನುಗ್ರಹದಿಂದ ಸ್ವಲ್ಪ ನೀರು ಚುಮುಕಿಸಿದ ಮೇಲೆ ಅವರಿಗೆ ಎಚ್ಚರಿಕೆಯಾಯಿತು. ನಿದ್ದೆಯಿಂದೆದ್ದಂತೆ ಎದ್ದು ಕುಳಿತರು. ಮತ್ತೊಬ್ಬ ಗುರುವಿನ ಶಿಷ್ಯರೆಂದು ಅರಿತ ಬಾಬಾ ಅವರಿಗೆ ಧೈರ್ಯ ಹೇಳಿ, ಅವರ ಗುರುವಿನಲ್ಲಿ ತಾವೂ ನಂಬಿಕೆಯನ್ನು ತೋರಿಸುವಂತೆ, "ಏನಾದರೂ ಆಗಲಿ. ನಿನ್ನ ಆಸರೆಯನ್ನೇ ಹಿಡಿದುಕೋ. ಅದನ್ನು ಬಿಡಬೇಡ. ಶ್ರದ್ಧಾಭಕ್ತಿಪೂರ್ವಕವಾಗಿ ಅವರನ್ನೇ ನಂಬಿಕೋ" ಎಂದು ಪಂತರಿಗೆ ಹೇಳಿದರು. ಬಾಬಾ ಏನು ಹೇಳಿದರು ಎಂಬುದು ಬೇರೆಯವರಿಗೆ ಅರ್ಥವಾಗದಿದ್ದರೂ, ಅದೇನು ಎಂಬುದರ ಅಂತರಾರ್ಥವನ್ನು ಅರಿತ ಪಂತರಿಗೆ ತಮ್ಮ ಗುರುವು ನೆನಪಿಗೆ ಬಂದರು. ಬಾಬಾ ಅವರ ಮನಸ್ಸಿನ ಆತಂಕವನ್ನು ಕಳೆದಿದ್ದರು. ಬಾಬಾರ ಈ ಕರುಣೆಯನ್ನು ಪಂತರು ತಮ್ಮ ಜೀವನ ಪರ್ಯಂತ ಮರೆಯಲಿಲ್ಲ.
ಹರಿಶ್ಚಂದ್ರ ಪಿತಳೆಯ ಕಥೆ
ದಾಸಗಣು ಕೀರ್ತನೆಗಳನ್ನು ಮಾಡುತ್ತಿದ್ದುದನ್ನೂ, ಪ್ರತಿಯೊಂದು ಕೀರ್ತನೆಯಲ್ಲೂ ಬಾಬಾರ ಲೀಲೆಗಳನ್ನು ವರ್ಣಿಸುತ್ತಿದ್ದುದನ್ನೂ ಈಗಾಗಲೇ ನೋಡಿದ್ದೇವೆ. ಅವರು ಕೀರ್ತನೆಗಳನ್ನು ಎಷ್ಟು ಚೆನ್ನಾಗಿ ಹೇಳುತ್ತಿದ್ದರೆಂದರೆ, ಶ್ರೋತೃಗಳು ಮುಗ್ಧರಾಗಿ ಕೇಳುತ್ತಾ, ಅದರಲ್ಲೇ ಮಗ್ನರಾಗಿಹೋಗುತ್ತಿದ್ದರು. ಕೆಲವರಿಗಂತೂ ಅದು ಅವರ ಹೃದಯ ಮುಟ್ಟಿ, ಅದರಿಂದ ಪ್ರಭಾವಿತರಾಗಿ, ಅವರು ಮನಸ್ಸಿನಲ್ಲೇ ಬಾಬಾರಿಗೆ ನಮಸ್ಕರಿಸುತ್ತಿದ್ದರು. ಚೋಳ್ಕರನಂತಹ ಕೆಲವರು, ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ಶಿರಡಿಗೆ ಹೋಗಿ ಬಾಬಾರ ಭಕ್ತರಾದರು. ಹರಿಶ್ಚಂದ್ರ ಪಿತಳೆ, ದಾಸಗಣೂರ ಕೀರ್ತನೆಗಳನ್ನು ಬಹಳವಾಗಿ ಮೆಚ್ಚಿಕೊಂಡಿದ್ದ, ಇನ್ನೊಬ್ಬ ಶ್ರೋತೃ. ಪಿತಳೆಯ ಮಗನಿಗೆ ಮೂರ್ಛೆ ರೋಗ ಇತ್ತು. ಅದು ಯಾವ ರೀತಿಯ ಚಿಕಿತ್ಸೆಗೂ ಬಗ್ಗಿರಲಿಲ್ಲ. ಬೇರೆ ದಾರಿಯೇ ಇಲ್ಲ ಎಂದಾಗಲೇ ನಮಗೆ ದೇವರ ನೆನಪು ಬರುವುದು. ಪಿತಳೆಗೂ ಇದೇ ರೀತಿಯಾಯಿತು. ದಾಸಗಣು ಕೀರ್ತನೆಗಳಲ್ಲಿ ಬಾಬಾರ ಲೀಲೆಗಳನ್ನು ಕೇಳಿದ ಅವರಿಗೆ, ಆಸೆಯ ಎಳೆಯೊಂದು ಸಿಕ್ಕಿದಂತಾಯಿತು. ಬಾಬಾರನ್ನು ದರ್ಶಿಸಬೇಕೆಂದು ನಿರ್ಧರಿಸಿ, ಬಾಬಾರಿಗೆ ಹಣ್ಣು ಕಾಣಿಕೆ ಎಲ್ಲವನ್ನೂ ಅಣಿಮಾಡಿಕೊಂಡು, ಪ್ರಯಾಣಕ್ಕೆ ಬೇಕಾದ ಸಿದ್ಧತೆಗಳನ್ನೆಲ್ಲಾ ಮಾಡಿಕೊಂಡು, ಹೆಂಡತಿ ಮಕ್ಕಳೊಡನೆ ಶಿರಡಿ ಸೇರಿದರು.
ಶಿರಡಿಯಲ್ಲಿ, ಮಸೀದಿಗೆ ಹೋಗಿ ಬಾಬಾರಿಗೆ ನಮಸ್ಕಾರಮಾಡಿ, ತಮ್ಮ ಮಗನನ್ನು ಅವರ ಪಾದಗಳಲ್ಲಿಟ್ಟರು. ಬಾಬಾ ಆ ಹುಡುಗನನ್ನು ಒಂದುಸಲ ನೋಡಿದರು. ತಕ್ಷಣವೇ, ಆ ಹುಡುಗ ಕಣ್ಣು ಮೇಲಕ್ಕೆ ಮಾಡಿ ಪ್ರಜ್ಞೆತಪ್ಪಿ ಕೆಳಕ್ಕೆ ಬಿದ್ದುಬಿಟ್ಟ. ಬಾಯಿಂದ ನೊರೆ ಬರಲು ಆರಂಭವಾಯಿತು. ಮೈಯೆಲ್ಲಾ ಬೆವರಿತು. ಅವನನ್ನು ನೋಡಿದರೆ ಕೊನೆಯುಸಿರು ಬಿಟ್ಟನೇನೋ, ಎಂಬಂತೆ ಕಾಣಿಸಿತು. ಹುಡುಗನನ್ನು ಆ ಸ್ಥಿತಿಯಲ್ಲಿ ನೋಡಿದ ಅವನ ತಂದೆತಾಯಿಗಳು ಅವನು ಸತ್ತುಹೋದನೇನೋ, ಎಂದು ಗಾಬರಿಯಾದರು. ಮುಂಚೆಯೂ ಅವನಿಗೆ ಈ ರೀತಿ ಆಗುತ್ತಿತ್ತು, ಆದರೆ, ಇಷ್ಟು ತೀವ್ರವಾಗಿರಲಿಲ್ಲ. ತಾಯಿ ಪರಮದುಃಖಿತಳಾಗಿ ಕಣ್ಣೀರು ಸುರಿಸುತ್ತಾ ಗೋಳಾಡಲು ಪ್ರಾರಂಭಿಸಿದಳು. ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮರದ ನೆರಳಿಗೆ ಹೋದರೆ ಮರವೇ ಮೇಲೆ ಬಿದ್ದಂತೆ ಎಂದು ಹೇಳಿಕೊಂಡು ದೊಡ್ಡದಾಗಿ ಅಳಲಾರಂಭಿಸಿದಳು. ಅವಳ ದುಃಖಾತಿರೇಕವನ್ನು ಕಂಡ ಬಾಬಾ, "ಅಮ್ಮಾ ಅಳಬೇಡ. ಸಹನೆಯಿಂದಿರು. ಇನ್ನೊಂದು ಅರ್ಧ ಗಂಟೆಯಲ್ಲಿ ನಿನ್ನ ಮಗನಿಗೆ ಎಲ್ಲವೂ ಸರಿಹೋಗುತ್ತದೆ. ಅವನನ್ನು ವಾಡಾಗೆ ಕರೆದುಕೊಂಡು ಹೋಗಿ ಮಲಗಿಸಿ" ಎಂದರು. ಅವರು ಹೇಳಿದಂತೆ ಮಾಡಿದ ಅರ್ಧ ಗಂಟೆಯಲ್ಲೇ, ಆ ಹುಡುಗ ನಿದ್ದೆಯಿಂದ ಎಚ್ಚರಗೊಂಡವನಂತೆ ಎದ್ದ. ಆರೋಗ್ಯವಂತನಾಗಿದ್ದ. ಅದನ್ನು ನೋಡಿದ ಪಿತಳೆ, ಅವನ ಹೆಂಡತಿ ಎಲ್ಲರಿಗೂ ಅತ್ಯಂತ ಸಂತೋಷವಾಯಿತು. ಅವರ ಸಂದೇಹಗಳೆಲ್ಲಾ ತೀರಿದವು.
ನಂತರ ಪಿತಳೆ ಮಸೀದಿಗೆ ಹೋಗಿ, ಬಾಬಾರ ಪಾದಗಳಿಗೆ ನಮಸ್ಕರಿಸಿ ಅವರ ಪಾದಗಳನ್ನು ನೀವುತ್ತಾ ಕುಳಿತರು. ಪಿತಳೆಯ ಮನಸ್ಸು ಬಾಬಾರಲ್ಲಿ ಕೃತಜ್ಞತೆಯಿಂದ ತುಂಬಿಹೋಗಿತ್ತು. ಆಗ ಬಾಬಾ ಹೇಳಿದರು, "ಈಗ ಮನಸ್ಸು ಶಾಂತವಾಯಿತೆ? ಯಾರಿಗೆ ಶ್ರದ್ಧೆ ಸಹನೆಗಳಿವೆಯೋ ಅವರನ್ನು ಶ್ರೀಹರಿ ಕಾಪಾಡುತ್ತಾನೆ." ಪಿತಳೆ ಶ್ರೀಮಂತರು. ಮಸೀದಿಯಲ್ಲಿ ಎಲ್ಲರಿಗೂ ಸಿಹಿ ಹಂಚಿ, ಬಾಬಾರಿಗೆ ಹಣ್ಣಿನ ಬುಟ್ಟಿಗಳು, ಬೀಡಾ ಎಲ್ಲವನ್ನೂ ಕೊಟ್ಟರು. ಆತನ ಹೆಂಡತಿ ಸರಳವಾದ ಹೆಂಗಸು. ದೈವ ಭೀರು. ಪ್ರೇಮಮಯಿ. ಆಕೆ ಮಸೀದಿಯಲ್ಲಿ ಕಂಬಕ್ಕೆ ಒರಗಿಕೊಂಡು ಕೂತು, ತದೇಕ ದೃಷ್ಟಿಯಿಂದ ಬಾಬಾರನ್ನೇ ನೋಡುತ್ತಾ, ಆನಂದ ಬಾಷ್ಪಗಳನ್ನು ಸುರಿಸುತ್ತಿದ್ದಳು. ಆಕೆಯ ದೃಷ್ಟಿಯಲ್ಲಿ ಬಾಬಾರನ್ನು ಬಿಟ್ಟರೆ ಬೇರೆ ಏನೂ ಇರಲಿಲ್ಲ. ಅಂತಹ ಭಕ್ತಿಯನ್ನು ಕಂಡರೆ ದೇವರಿಗೆ ಬಹಳ ಪ್ರೀತಿ. ಆಕೆಯನ್ನು ಹಾಗೆ ನೋಡಿದ ಬಾಬಾ, ತಾವೂ ಆಕೆಯನ್ನು ಅದೇ ರೀತಿಯಲ್ಲಿ ಕಂಡರು. ಮತ್ತೆ ನಾಲ್ಕಾರು ದಿನ ಶಿರಡಿಯಲ್ಲೇ ಕಳೆದು, ಪಿತಳೆ ಸಂಸಾರ ಹಿಂತಿರುಗಲು ಅಣಿಯಾಗಿ, ಮಸೀದಿಗೆ ಹೋಗಿ ಬಾಬಾರ ಆಪ್ಪಣೆ ಬೇಡಿದರು. ಉದಿಪ್ರಸಾದವನ್ನು ಪಡೆದು, ಇನ್ನೇನು ಹೊರಡಬೇಕು ಎಂದಿರುವಾಗ ಬಾಬಾ ಪಿತಳೆಯನ್ನು ಕರೆದು, "ಇದಕ್ಕೆ ಮುಂಚೆ ನಿನಗೆ ಎರಡು ರೂಪಾಯಿ ಕೊಟ್ಟಿದ್ದೇನೆ. ಈ ಮೂರು ರೂಪಾಯಿಯನ್ನೂ ತೆಗೆದುಕೋ. ನಿನ್ನ ಪೂಜಾ ಗೃಹದಲ್ಲಿಟ್ಟು ಪೂಜೆ ಮಾಡು" ಎಂದರು. ಪಿತಳೆ ಅದನ್ನು ತೆಗೆದುಕೊಂಡು, ಬಾಬಾರಿಗೆ ಮತ್ತೆ ನಮಸ್ಕಾರಮಾಡಿ ಸದಾ ನಮ್ಮನ್ನು ಹೀಗೇ ರಕ್ಷಿಸುತ್ತಿರಿ, ಎಂದು ಬೇಡಿಕೊಂಡು ಅಲ್ಲಿಂದ ಹೊರಟರು.
ಮಸೀದಿಯಿಂದ ಹೊರಕ್ಕೆ ಬಂದಮೇಲೆ ಪಿತಳೆಯ ಮನಸ್ಸು ಯೋಚನೆಯಲ್ಲಿ ಬಿತ್ತು. “ನಾನು ಶಿರಡಿಗೆ ಬರುತ್ತಿರುವುದು ಇದೇ ಮೊದಲನೆಯ ಸಲ. ಬಾಬಾರನ್ನು ಕಾಣುತ್ತಿರುವುದೂ ಮೊದಲನೆಯ ಸಲ. ಬಾಬಾ ಇದಕ್ಕೆ ಮೊದಲು ನಾನು ನಿನಗೆ ಎರಡು ರೂಪಾಯಿ ಕೊಟ್ಟಿದ್ದೇನೆ ಎಂದು ಹೇಳಿದುದರ ಅರ್ಥವೇನು?” ಎನ್ನುವ ಯೋಚನೆಯಲ್ಲೇ ಪ್ರಯಾಣ ಮುಗಿಯಿತು. ಮನೆಗೆ ಹೋದ ತಕ್ಷಣವೇ ತಮ್ಮ ವಯಸ್ಸಾದ ತಾಯಿಯನ್ನು ಕಂಡು, ಅವರಿಗೆ ಶಿರಡಿಯಲ್ಲಿ ನಡೆದಿದ್ದನ್ನೆಲ್ಲಾ ವಿವರವಾಗಿ ಹೇಳಿದರು. ಬಾಬಾ ತನಗೆ ಈ ಮುಂದೆ ಎರಡು ರೂಪಾಯಿ ಕೊಟ್ಟಿದ್ದೇನೆ ಎಂದು ಹೇಳಿದ್ದನ್ನೂ ತಿಳಿಸಿ, ನನಗೆ ಅದು ಹೇಗೆ ಎಂಬುದು ಇನ್ನೂ ಅರ್ಥವಾಗಿಲ್ಲ, ಎಂದೂ ಹೇಳಿದರು. ಆಕೆಗೂ ಅದೇನು ಎಂಬುದು ಮೊದಲು ಅರ್ಥವಾಗಲಿಲ್ಲ. ಒಂದೆರಡು ದಿನಗಳಾದ ಮೇಲೆ ಆಕೆಗೆ ಅದೇನು ಎಂದು ನೆನಪಿಗೆ ಬಂದು, ಮಗನನ್ನು ಕರೆದು, "ನೀನು ಈಗ ನಿನ್ನ ಮಗನನ್ನು ಕರೆದುಕೊಂಡು ಶಿರಡಿಗೆ ಹೋದಂತೆ, ನಿನ್ನ ತಂದೆ ಬಹಳ ಹಿಂದೆ ನಿನ್ನನ್ನು ಅಕ್ಕಲಕೋಟೆಗೆ ಮಹಾರಾಜರ ದರ್ಶನಕ್ಕೆ ಕರೆದುಕೊಂಡು ಹೋಗಿದ್ದರು. ಮಹಾರಾಜರೂ ಸಂಪೂರ್ಣ ಯೋಗಿ. ದಯಾಮೂರ್ತಿ. ನಿನ್ನ ತಂದೆ ಸಾತ್ವಿಕ ಭಕ್ತಿಪೂರ್ಣರು. ಅದರಿಂದಲೇ ಅವರನ್ನು ಮಹಾರಾಜರು ಅಂಗೀಕರಿಸಿದ್ದರು. ಅವರು ನಿನ್ನ ತಂದೆಯವರಿಗೆ ಎರಡು ರೂಪಾಯಿ ಕೊಟ್ಟು, ಅದನ್ನು ಪೂಜಾಮಂದಿರದಲ್ಲಿಟ್ಟು ಪೂಜೆಮಾಡಿಕೊಳ್ಳುವಂತೆ ಹೇಳಿದ್ದರು. ನಿಮ್ಮ ತಂದೆ ತಾವು ಬದುಕಿರುವವರೆಗೂ ಅದನ್ನು ಪೂಜಾಗೃಹದಲ್ಲಿಟ್ಟು ಪೂಜೆಮಾಡುತ್ತಿದ್ದರು. ಅವರು ಹೋದಮೇಲೆ ಪೂಜೆಪುನಸ್ಕಾರಗಳೆಲ್ಲ ನಿಂತುಹೋದವು. ಆ ರೂಪಾಯಿ ಬಿಲ್ಲೆಗಳೂ ಕಳೆದುಹೋದವು. ನೀನು ಬಹಳ ಅದೃಷ್ಟವಂತ. ಬಾಬಾ ರೂಪದಲ್ಲಿ ಮತ್ತೆ ಅಕ್ಕಲಕೋಟೆಯ ಮಹಾರಾಜರೇ, ನೀನು ಮಾಡಬೇಕಾದ ಕರ್ತವ್ಯವನ್ನು ನಿನ್ನ ನೆನಪಿಗೆ ತಂದುಕೊಟ್ಟಿದ್ದಾರೆ. ಪೂಜೆಪುನಸ್ಕಾರಗಳನ್ನು ಮತ್ತೆ ಆರಂಭಿಸು. ದುಷ್ಟಶಕ್ತಿಗಳ ನಿವಾರಣೆಯಾಗುತ್ತದೆ. ನಿನ್ನ ಸಂದೇಹಗಳು, ದುಷ್ಟ ಯೊಚನೆಗಳನ್ನೆಲ್ಲಾ ಬಿಟ್ಟು, ನಿನ್ನ ಕರ್ತವ್ಯವನ್ನು ಮಾಡು. ಸಂತರಲ್ಲಿ ಭಕ್ತಿ, ಶ್ರದ್ಧೆಗಳನ್ನು ಬೆಳೆಸಿಕೋ. ಹಿಂದಿನಿಂದ ಬಂದಿರುವ ನಿನ್ನ ಕುಲದೇವತೆಗಳ ಜೊತೆಗೆ ಈ ರೂಪಾಯಿಗಳನ್ನೂ ಇಟ್ಟು ದಿನವೂ ಪೂಜೆ ಮಾಡು. ಶಿರಡಿಯ ಆ ಸಾಯಿ ಸಮರ್ಥ ನಿನ್ನಲ್ಲಿ ಮತ್ತೆ ಭಕ್ತಿಬೀಜವನ್ನು ಹಾಕಿದ್ದಾರೆ. ಅದನ್ನು ಜತನವಾಗಿ ಬೆಳೆಸಿ ಅದರಿಂದ ಲಾಭಪಡೆ" ಎಂದು ಹೇಳಿದರು. ಆಕೆಯ ಮಾತುಗಳು ಆತನಿಗೆ ಅಮೃತದಂತೆ ತಂಪೆರೆದು, ತಡಮಾಡದೆ ಆಕೆ ಹೇಳಿದಂತೆ ಮಾಡಲುಪಕ್ರಮಿಸಿದರು. ಬಾಬಾ ತನ್ನನ್ನು ಇಷ್ಟುದಿನ ತಮ್ಮ ತೆಕ್ಕೆಯೊಳಗಿಟ್ಟುಕೊಂಡು ಕಾಪಾಡಿ, ತನ್ನ ಮಗನ ನೆವದಲ್ಲಿ ಶಿರಡಿಗೆ ಬರಮಾಡಿಕೊಂಡು ಆಶೀರ್ವದಿಸಿದರು ಎಂದು ಬಹಳ ಸಂತಸಪಟ್ಟರು. ಅಂದಿನಿಂದ ಆ ಮಹಾತ್ಮನಿಗೆ ಶರಣಾಗಿ ಅವರ ಅನನ್ಯ ಭಕ್ತರಾದರು.
ಗೋಪಾಲ ಅಂಬಾಡೇಕರ್ ಕಥೆ
ಪೂನಾದ ಗೋಪಾಲ ನಾರಾಯಣ ಅಂಬಾಡೇಕರ್, ಥಾಣಾ ಜಿಲ್ಲೆಯ ಅಬ್ಕಾರಿ ಇಲಾಖೆಯಲ್ಲಿ ಹತ್ತು ವರ್ಷ ಕೆಲಸ ಮಾಡಿದರು. ನಿವೃತ್ತರಾದಮೇಲೆ ಬೇರೆ ಕೆಲಸಗಳಿಗಾಗಿ ಪ್ರಯತ್ನ ಮಾಡಿದರೂ ಸಫಲವಾಗಲಿಲ್ಲ. ಒಂದಾದಮೇಲೊಂದು ಕಷ್ಟಗಳಿಗೀಡಾಗಿ, ಆತನಿಗೆ ಮನಸ್ವಾಸ್ಥ್ಯ ಕೆಟ್ಟುಹೋಯಿತು. ಇದೇ ರೀತಿಯಲ್ಲಿ ಏಳು ವರ್ಷ ಕಳೆಯಿತು. ಆತ ಬಾಬಾರಲ್ಲಿ ಅತ್ಯಂತ ಭಕ್ತಿಯನ್ನಿಟ್ಟಿದ್ದರಿಂದ, ಪ್ರತಿ ವರ್ಷ ತಪ್ಪದೆ ಶಿರಡಿಗೆ ಹೋಗಿ ಬಾಬಾರ ದರ್ಶನ ಮಾಡಿ ಬರುತ್ತಿದ್ದರು. ಹೋದಾಗಲೆಲ್ಲಾ ಬಾಬಾರಲ್ಲಿ ತನ್ನ ಕಷ್ಟ ಪರಿಸ್ಥಿತಿಯನ್ನು ಹೇಳಿಕೊಳ್ಳುತ್ತಿದ್ದರು. ೧೯೧೬ರಲ್ಲಿ ಆತನ ಪರಿಸ್ಥಿತಿ ಬಹಳ ಕೆಟ್ಟು ಹೋಗಿ, ಬಾಬಾ ಸನ್ನಿಧಿಯಲ್ಲಿ ಪ್ರಾಣ ಬಿಡುವುದೆಂದು ನಿಶ್ಚಯಿಸಿ, ತಮ್ಮ ಹೆಂಡತಿಯೊಡನೆ ಶಿರಡಿಗೆ ಹೋಗಿ ಎರಡು ತಿಂಗಳು ಕಳೆದರು. ಅದಾದಮೇಲೆ ಒಂದುದಿನ ರಾತ್ರಿ ದೀಕ್ಷಿತ್ ವಾಡಾ ಹತ್ತಿರದಲ್ಲಿದ್ದ ಭಾವಿಯಲ್ಲಿ ಬಿದ್ದು ಸಾಯಬೇಕೆಂದು ನಿರ್ಧರಿಸಿಕೊಂಡು, ವಾಡಾದ ಮುಂದೆ ಎತ್ತಿನ ಬಂಡಿಯೊಂದರಲ್ಲಿ ಕುಳಿತಿದ್ದರು. ಆದರೆ ಮನುಷ್ಯ ಯೋಚಿಸುವುದೊಂದು ದೇವರು ಮಾಡುವುದು ಇನ್ನೊಂದು. ಆ ರಾತ್ರಿಯಲ್ಲೂ, ಹತ್ತಿರದ ಉಪಹಾರಗೃಹದ ಮಾಲೀಕ ಸಗುಣ ಮೇರು ನಾಯಕ್ ಅಲ್ಲಿಗೆ ಬಂದರು. ಮಾತುಕಥೆಯಾಡುತ್ತಾ ಅವರು ಅಂಬಾಡೇಕರರನ್ನು, "ನೀನು ಅಕ್ಕಲಕೋಟ್ ಮಹಾರಾಜರ ಚರಿತ್ರೆಯನ್ನು ಓದಿದ್ದೀಯಾ? ಅದು ಎಲ್ಲರೂ ಓದಬೇಕಾದಂತಹ ಪುಸ್ತಕ" ಎಂದು ಹೇಳುತ್ತಾ ತಮ್ಮ ಕೈಲಿದ್ದ ಪುಸ್ತಕವನ್ನು ಅವರಿಗೆ ಕೊಟ್ಟು ಹೊರಟು ಹೋದರು. ಆ ಪುಸ್ತಕ ಅಂಬಾಡೇಕರರ ಜೀವನವನ್ನೇ ಬದಲಾಯಿಸಿತು. ಅವರು ವಾಡಾಕ್ಕೆ ಹಿಂತಿರುಗಿ ಪುಸ್ತಕವನ್ನು ಓದಲು ತೆರೆದರು. ತೆರೆದ ಪುಟದಲ್ಲಿ ಕಂಡ ಕಥೆ:
ಅಕ್ಕಲಕೋಟ್ ಮಹಾರಾಜರಿಗೆ ಅನೇಕ ಭಕ್ತರಿದ್ದರು. ಅವರಲ್ಲೊಬ್ಬ, ವಾಸಿಯಾಗದ ಖಾಯಿಲೆಯೊಂದರಿಂದ ಬಹಳ ನರಳುತ್ತಿದ್ದ. ನೋವು, ದುಃಖ ಅಸಹನೀಯವಾಗಿ ಅವನು ಆತ್ಮಹತ್ಯೆ ಮಾಡಿಕೊಳ್ಳಲು ನಿಶ್ಚಯಿಸಿ, ರಾತ್ರಿ ಯಾರೂ ಇಲ್ಲದ ಸಮಯ ನೋಡಿಕೊಂಡು, ಭಾವಿಯೊಳಕ್ಕೆ ಹಾರಿದ. ಯಾರೂ ಇಲ್ಲವೆಂದುಕೊಂಡವನಿಗೆ, ಆ ರಾತ್ರಿಯಲ್ಲೂ ಯಾರೋ ಒಬ್ಬರು ಬಂದು ಅವನನ್ನು ಭಾವಿಯಿಂದ ಈಚೆಗೆ ತೆಗೆದರು. ಕಣ್ಣುಬಿಟ್ಟಾಗ ಅವನು ಕಂಡದ್ದು, ಎದುರುಗಡೆ ನಿಂತಿದ್ದ ಅಕ್ಕಲಕೋಟ್ ಮಹಾರಾಜರನ್ನು. "ಪೂರ್ವಜನ್ಮಕೃತ ಫಲಗಳನ್ನು ಪೂರ್ಣವಾಗಿ ಅನುಭವಿಸಿ ಕಳೆಯಬೇಕು. ಹೀಗೆ ಸಾಯುವುದರಿಂದ, ಪೂರ್ಣವಾಗದೆ ಅದು ಬಾಕಿ ಉಳಿಯುತ್ತದೆ. ಅದನ್ನು ಅನುಭವಿಸಲು, ಮತ್ತೊಂದು ಜನ್ಮ ತಾಳಬೇಕು. ಹೇಗಾದರೂ ಅದನ್ನು ಪೂರ್ಣವಾಗಿ ಅನುಭವಿಸಿಯೇ ತೀರಿಸಬೇಕು. ಇದರಿಂದ ನೀನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಆದ್ದರಿಂದ ಈಗ ಹೀಗೆ ಸಾಯುವ ಬದಲು, ಇನ್ನೂ ಸ್ವಲ್ಪಕಾಲ ಈ ನೋವನ್ನು ಅನುಭವಿಸಿ ನಿನ್ನ ಕರ್ಮಫಲಗಳನ್ನು ತೀರಿಸಿಕೊಳ್ಳಬಾರದೇಕೆ? ದೇವರು ನಿಶ್ಚಯಿಸಿರುವತನಕ ಬದುಕು. ಹೀಗೆ ಪ್ರಾಣ ಕಳೆದುಕೊಳ್ಳಬೇಡ" ಎಂದು ಬುದ್ಧಿ ಹೇಳಿದರು.
ಆ ಕಥೆಯನ್ನು ಓದಿ ಅಂಬಾಡೇಕರರಿಗೆ ಆಶ್ಚರ್ಯವಾಯಿತು. ಸಕಾಲೀಕವಾದ ಅದು ತನಗೇ ಅನ್ವಯಿಸಿದಂತೆ ಕಂಡರು. ಈ ಪ್ರಸಂಗವೇ ಆಗದಿದ್ದರೆ, ತಾನು ಬಹುಶಃ ಆ ಹೊತ್ತಿಗೆ ಈ ಪ್ರಪಂಚದಲ್ಲೇ ಇರುತ್ತಿರಲಿಲ್ಲ. ರಾತ್ರಿಹೊತ್ತು ಯಾರೂ ಬರುವುದಿಲ್ಲ ಎಂಬ ನಂಬಿಕೆಯಿಂದ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಬಂದರೆ, ಬಾಬಾ ಸಗುಣ ಮೇರು ನಾಯಕನ ರೂಪದಲ್ಲಿ ಬಂದು ತನ್ನನ್ನು ರಕ್ಷಿಸಿದರು. ಅಂಬಾಡೇಕರರಿಗೆ ಬಾಬಾರ ಸರ್ವವ್ಯಾಪಕತ್ವ, ಸರ್ವಜ್ಞತ್ವ, ಅವರಿಗೆ ಭಕ್ತರ ಮೇಲೆ ಇರುವ ಅನುಕಂಪ ಎಲ್ಲವೂ ಚೆನ್ನಾಗಿ ಅರ್ಥವಾಯಿತು. ಬಾಬಾರಲ್ಲಿ ಅವರಿಗೆ ಶ್ರದ್ಧಾಭಕ್ತಿಗಳು ಇನ್ನೂ ವೃದ್ಧಿಯಾಗಿ ಧೃಢವಾಯಿತು. ಅವರ ತಂದೆ ಅಕ್ಕಲಕೋಟ್ ಮಹಾರಾಜರ ಭಕ್ತರಾಗಿದ್ದರು. ಅಂಬಾಡೇಕರ್ ತಂದೆಯನ್ನನುಸರಿಸಿ ಅದನ್ನು ಮುಂದುವರೆಸುವಂತೆ ಬಾಬಾ ಮಾಡಿದರು. ಮಾರನೇ ದಿನ ಅವರಿಗೆ ಬಾಬಾರ ಆಶೀರ್ವಾದ ದೊರೆತು, ಅವರು ಬದಲಾದ ಮನುಷ್ಯರಾದರು. ಜ್ಯೋತಿಶ್ಶಾಸ್ತ್ರವನ್ನು ಓದಿ ಅದರಲ್ಲಿ ಪರಿಣತರಾಗಿ, ಸಾಕಷ್ಟು ಸಂಪಾದನೆ ಮಾಡುತ್ತಾ, ತಮ್ಮ ಶೇಷಜೀವನದಲ್ಲಿ ಸೌಖ್ಯವನ್ನು ಕಂಡುಕೊಂಡರು.
ಅಂತಹ ಕರುಣಾಮೂರ್ತಿ, ಸದ್ಗುರು ಸಾಯಿನಾಥ ಮಹಾರಾಜರಿಗೆ ಜೈಕಾರವನ್ನು ಹೇಳಿ ನಮ್ಮನ್ನು ಅನವರತ ಕಾಪಾಡುತ್ತಿರು ಎಂದು ಬೇಡಿಕೊಳ್ಳೋಣ.
ಇದರೊಂದಿಗೆ ಭಕ್ತ ಪಂತ, ಹರಿಶ್ಚಂದ್ರ ಪಿತಳೆ, ಗೋಪಾಲ ಅಂಬಾಡೇಕರ್, ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಇಪ್ಪತ್ತಾರನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್, ಭಾಗವತ, ವಿಷ್ಣು ಸಹಸ್ರನಾಮ, ಗೀತಾ ರಹಸ್ಯ ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.
||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||
||ಓಂ ಶಾಂತಿಃ ಶಾಂತಿಃ ಶಾಂತಿಃ||